ಬರೋಬ್ಬರಿ 344 ವರ್ಷಗಳ ಹಿಂದೆ ಶಿವಾಜಿ ಮಹಾರಾಜರು ಬರೆದಿದ್ದ ರಹಸ್ಯ ಪತ್ರ ಇದೀಗ ಪತ್ತೆ

ಘನಶ್ಯಾಮ್ ದಹಾನೆ ಎಂಬ ಇತಿಹಾಸಕಾರರೊಬ್ಬರು ಪ್ರಸ್ತುತ ಮಹಾರಾಷ್ಟ್ರದ ‘ಸತಾರಾ’ ಜಿಲ್ಲೆಯ ಇತಿಹಾಸದ ಬಗ್ಗೆ ಸಂಶೋಧನೆ ನಡೆಸುತ್ತ ಅಲ್ಲಿನ ಮಾಹಿತಿಗಳನ್ನ ಸಂಗ್ರಹಿಸುತ್ತಿದ್ದಾರೆ. ಈ ಮಾಹಿತಿ ಸಂಗ್ರಹಣೆಯ ಕಾರ್ಯಕ್ಕಾಗಿ ಅವರು ಸತಾರಾ ಜಿಲ್ಲೆಯ ಧುಲೆ ಗ್ರಾಮದಲ್ಲಿರುವ ಸ್ವಾಮಿ ಸಮರ್ಥ ವಾಗ್ದೇವತಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ದಹಾನೆಯವರು ಈ ಮಂದಿರದಲ್ಲಿ ಸಂರಕ್ಷಿಸಿಡಲಾಗಿದ್ದ ಕೆಲ ದಾಖಲೆಗಳನ್ನು ಅಧ್ಯಯನ ಮಾಡಲು ಮುಂದಾದರು. ಆದರೆ ಅವರು ಕನಸು ಮನಸಲ್ಲೂ ತಮ್ಮ ಈ ಅಧ್ಯಯನದಲ್ಲಿ ಹಿಂದವಿ ಸ್ವರಾಜ್ಯ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪತ್ರವೊಂದು ಸಿಗುತ್ತೆಯೆಂದು ಅಂದುಕೊಂಡಿರಲಿಲ್ಲ.

ಪುಣೆ ಮಿರರ್‌ ಎಂಬ ಪತ್ರಿಕೆಯ ಜೊತೆ ಮಾತನಾಡಿದ ದಹಾನೆ, “ಈ ಎಲ್ಲಾ ದಾಖಲೆಗಳನ್ನು ಸಂರಕ್ಷಿಸಲಾಗಿಟ್ಟಿದ್ದ ಕೋಣೆಗೆ ನನ್ನನ್ನು ಕರೆದೊಯ್ಯಲಾಯಿತು ಅಬ್ಬಾ ಆ ಕೋಣೆಯಲ್ಲಿ ತಾಪವೂ ಹೆಚ್ಚೇ ಇತ್ತು ಅನ್ನೋದು ನನಗೆ ಈಗಲೂ ನೆನಪಿದೆ. ಆ ಕೋಣೆಗೆ ಹಲವಾರು ವರ್ಷಗಳಿಂದ ಯಾರೂ ಹೋಗದಿದ್ದದ್ದರಿಂದ ಅದು ಪೂರ್ಣವಾಗಿ ಧೂಳಿನಿಂದ ಆವೃತವಾಗಿತ್ತು.

ನಾನು ಕೂಲಂಕುಷವಾಗಿ ಅಲ್ಲಿದ್ದ ಬೇರೆ ಬೇರೆ ದಾಖಲೆಗಳನ್ನ ಪರಿಶೀಲಿಸೋಕೆ ಮುಂದಾದೆ. ಆದರೆ ಅವಿಷ್ಟೂ ದಾಖಲೆಗಳ ಮಧ್ಯೆ ಈ ನಿರ್ದಿಷ್ಟ ಪತ್ರದ ಮೇಲೆ ನಾನು ಕೈ ಹಾಕಿದಾಕ್ಷಣ, ಈ ಪತ್ರದಲ್ಲಿ ಅದೇನೋ ನಿಗೂಢ ಸಂಗತಿಯಿದೆ ಅಂತ ಅನಿಸಿತು.”

ಬರೋಬ್ಬರಿ 344 ವರ್ಷಗಳಷ್ಟು ಹಳೆಯದಾಗಿರುವ ಈ ಪತ್ರವನ್ನ ಶಿವಾಜಿ ಮಹಾರಾಜರು ಫೆಬ್ರವರಿ 2, 1674 ರಂದು ಬರೆದಿದ್ದರು. ಈಗಲೂ ಈ ಪತ್ರ ಉತ್ತಮ ಸ್ಥಿತಿಯಲ್ಲೇ ಇದ್ದು ಸುಲಭವಾಗಿ ಪತ್ರವನ್ನ ಓದಿ ಅರ್ಥೈಸಿಕೊಳ್ಳಬಹುದಾಗಿದೆ.

“ಈ ಪತ್ರವನ್ನು ಮೋದಿ ಲಿಪಿಯಲ್ಲಿ ಬರೆಯಲಾಗಿದೆ (ಮರಾಠಿ ಬರೆಯಲು ಬಳಸಿದ ಸ್ಕ್ರಿಪ್ಟ್) ಮತ್ತು ಮೇಲ್ಭಾಗದಲ್ಲಿ ‘ರಾಜಮುದ್ರ’ (ರಾಯಲ್ ಸೀಲ್) ಕೂಡ ಇರುವುದು ಇದು ಅಂದು ಶಿವಾಜಿ ಮಹಾರಾಜರೇ ಬರೆದ ಪತ್ರವೆಂಬುದನ್ನ ಖಾತ್ರಿಪಡಿಸುತ್ತದೆ” ಎಂದು ಸಂಶೋಧಕರು ತಿಳಿಸಿದ್ದಾರೆ.

ಇದರ ಜೊತೆ ಜೊತೆಗೆ ಸಂಶೋಧಕರು ಹೇಳುವ ಪ್ರಕಾರ “ಇದುವರೆಗೂ ಇತಿಹಾಸಕಾರರಿಗೆ ಶಿವಾಜಿ ಮಹಾರಾಜರು ಬರೆದ ಒಟ್ಟು 274 ಪತ್ರಗಳು ದೊರೆತಿವೆ, ಅವುಗಳಲ್ಲಿ ಕೇವಲ 103 ಪತ್ರಗಳು ಮಾತ್ರ ಉತ್ತಮ ಸ್ಥಿತಿಯಲ್ಲಿದ್ದು ಓದಬಹುದಾಗಿದೆ ಹಾಗು ಉಳಿದ ಪತ್ರಗಳು ಹಾಳಾಗಿವೆ”

ಶಿವಾಜಿ ಮಹಾರಾಜರು ಈ ಪತ್ರವನ್ನು ಸತಾರದ ಪಾಲಿ ಗ್ರಾಮದ ಮುಖ್ಯಸ್ಥ ನಾಗೋಗಿ ಪಾಟೀಲ್ ಕಲ್ಭೋರ್ ಎಂಬ ವ್ಯಕ್ತಿಗೆ ಬರೆದಿದ್ದರು. ಜೂನ್ 6, 1674 ರಂದು ರಾಯಗಡ್ ಕೋಟೆಯಲ್ಲಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕಕ್ಕೂ ಐದು ತಿಂಗಳ ಮೊದಲು ಈ ಪತ್ರವನ್ನ ಬರೆಯಲಾಗಿತ್ತು. ಈ ಪತ್ರವು ಖರಾಡೇ ಪಾಟೀಲ್ ಬಿರುದ್ಧ ಕಲ್ಭೋರ್ ಎಂಬ ಮಂತ್ರಿ ಸಲ್ಲಿಸಿದ್ದ ದೂರಿಗೆ ಪ್ರತ್ಯುತ್ತರವಾಗಿ ಶಿವಾಜಿ ಮಹಾರಾಜರು ಬರೆದಿದ್ದರು.

ಖರಾಡೇ ಪಾಟೀಲ್ ತನ್ನೆಲ್ಲಾ ಮಿತಿಯನ್ನೂ ಮೀರಿದ್ದು ಒತ್ತಡ ಹೇರಿ ಬಲವಂತವಾಗಿ ಕಲ್ಭೋರ್‌ನನ್ನ ಅಧಿಕಾರದಿಂದ ಇಳಿಸಿ ಸತಾರಾ ತನ್ನ ಕೈ ವಶಮಾಡಿಕೊಂಡಿದ್ದ.

ಈ ಪತ್ರದಲ್ಲಿ ಶಿವಾಜಿ ಮಹಾರಾಜರು ಕಲ್ಭೋರ್‌ಗೆ “ನಾನು ಈ ಕುರಿತು ಮಾಹಿತಿ ಸಂಗ್ರಹಿಸಿದ್ದೇನೆ, ಹೌದು ನೀನು(ಕಲ್ಭೋರ್) ಹೇಳಿದ್ದು ಸರಿಯಾಗೇ ಇದೆ. ಖರಾಡೇ ಪಾಟೀಲನಿಗೆ ಎಚ್ಚರಿಕೆಯ ಸಂದೇಶ ನಾನು ನೀಡುತ್ತೇನೆ. ಕಲ್ಭೋರ್, ನೀನು ಈ ವಿಷಯದ ಬಗ್ಗೆ ಚಿಂತಿಸಬೇಡ, ಖರಾಡೆ ಪಾಟೀಲ್ ನಿನ್ನ ದಾರಿಗೆ ಮುಂದೆಂದೂ ಅಡ್ಡ ಬರದಂತೆ ಮಾಡೋಕೆ ‘ಸುಬೇದಾರ್’ (ಸ್ಥಳೀಯ ಮುಖ್ಯ ಅಧಿಕಾರಿ) ಅಬ್ಬಾಜಿ ಮೊರೆದೇವ್‌ರನ್ನ ನಾನು ನೇಮಿಸುತ್ತೇನೆ ನೀನು ಚಿಂತೆ ಮಾಡುವ ಅವಶ್ಯಕತೆಯಿಲ್ಲ” ಎಂದು ಬರೆದಿದ್ದರು. ಈ ಸಂಪೂರ್ಣ ಪತ್ರವನ್ನ ಕೇವಲ 10 ನಿಮಿಷಗಳಲ್ಲಿ ಅನುವಾದಿಸಿದೆ ಎಂದು ದಹಾನೆ ತಮ್ಮ ಇಂಟರ್‌ವ್ಯೂವ್ ನಲ್ಲಿ ತಿಳಿಸಿದ್ದಾರೆ.

ಶಿವಾಜಿ ಮಹಾರಾಜರ ಕುರಿತಾದ ಈ ಪತ್ರ ಸಂಶೋಧನೆಯನ್ನ ಇತರ ಇತಿಹಾಸಕಾರೂ ಪುಷ್ಟಿಗೊಳಿಸಿದ ಬಳಿಕ ಶಿವಾಜಿ ಮಹಾರಾಜರ ದಾಖಲಾತಿಗಳ ಪಟ್ಟಿಗೆ ಈ ಪತ್ರವನ್ನೂ ಸೇರಿಸಲಾಗುವುದು ಎಂದು ಹೇಳಲಾಗುತ್ತಿದೆ.

– Vinod Hindu Nationalist

Leave a Reply

Your e-mail address will not be published. Required fields are marked *

error: Content is protected !!