ಸರಣಿ ರಾಜಿನಾಮೆ ನೋಡಲಾಗದ ಮುಖ್ಯಮಂತ್ರಿ ದಿಢೀರ್ ನಾಪತ್ತೆ

ಮೈತ್ರಿ ಸರಕಾರದ ಆಡಳಿತ ಪಕ್ಷದ ಶಾಸಕರು ಒಬ್ಬರ ನಂತರ ಮತ್ತೊಬ್ಬರು ರಾಜೀನಾಮೆ ನೀಡತೊಡಗಿದ್ದು ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಸರ್ಕಾರ ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳು ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಈಗಾಗಲೇ ಮೈತ್ರಿ ಸರ್ಕಾರದ 15 ಶಾಸಕರು ರಾಜೀನಾಮೆ ನೀಡಿದ್ದರು. ಆದರೆ ಸೋಮವಾರ ಸ್ಪೀಕರ್ ಇರಲಿಲ್ಲ. ಹೀಗಾಗಿ ಇಂದು  ಸ್ಪೀಕರ್ ರಮೇಶ್ ಕುಮಾರ್ ಅವರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ರಾಜ್ಯದ ಜನರಲ್ಲಿ ಮೂಡಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಕುಮಾರ್ ಅವರು, ಮತದಾರರ ಅಭಿಪ್ರಾಯವನ್ನು ಸಂಗ್ರಹಿಸುತ್ತೇನೆ. ಸಾರ್ವಜನಿಕರ ದೂರು ಆಲಿಸಿದ  ಬಳಿಕ ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಕೆಲ ಹೊತ್ತಿನ ಮುಂಚೆ ಸಚಿವ ಎಂಟಿಬಿ ನಾಗರಾಜ್ ಹಾಗೂ ಶಾಸಕ ಸುಧಾಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ವಾಪಸಾಗುವ ಸಂದರ್ಭದಲ್ಲಿ ಸುಧಾಕರ್ ಅವರು ಕಾಂಗ್ರೆಸ್ ನಾಯಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕೂಡಲೇ ಅವರನ್ನು ಸುತ್ತುವರೆದ ಸಚಿವ ಪ್ರಿಯಾಂಕ್ ಖರ್ಗೆ ಮತ್ತಿತರ ಕಾಂಗ್ರೆಸ್ ನಾಯಕರು ಅವರಿಗೆ ಏರುದನಿಯಲ್ಲಿ ರಾಜೀನಾಮೆ ನೀಡಿರುವುದಕ್ಕೆ ಆಕ್ಷೇಪಿಸಿದ್ದಾರೆ.

ಅಲ್ಲದೆ ಶಾಸಕ ಸುಧಾಕರ್ ಅವರನ್ನು ಸಚಿವ ಕೆಜೆ ಜಾರ್ಜ್ ಅವರ ಕೊಠಡಿಗೆ ಕರೆದೊಯ್ದಿದ್ದು, ವಿಧಾನಸೌಧದಲ್ಲಿ ನಾಟಕೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕರ ರಾಜೀನಾಮೆ ಮುಂದುವರೆದಿರುವಂತೆಯೇ ಕಾಂಗ್ರೆಸ್ ನಾಯಕರು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

ಇದರ ನಡುವೆ ಬೆಂಗಾವಲು ವಾಹನ ಬಿಟ್ಟು ಅಜ್ಞಾತ ಸ್ಥಳಕ್ಕೆ ಸಿಎಂ ಕುಮಾರಸ್ವಾಮಿ ತೆರಳಿದ್ದಾರೆ. ಗೃಹ ಕಚೇರಿ ಕೃಷ್ಣಾದಿಂದ ಜೆಪಿ ನಗರದ ಮನೆಗೆ ಬಂದಿದ್ದ ಸಿಎಂ ಕುಮಾರಸ್ವಾಮಿ, ಬೆಂಗಾವಲು ವಾಹನ ಬಿಟ್ಟು ಜೆಪಿ ನಗರದ ಮನೆಯಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಅನಿರೀಕ್ಷಿತ ಬೆಳವಣಿಗೆಗಳ ನಡೆಯುತ್ತಿದ್ದು, ಕ್ಷಣಕೊಂದು ತಿರುವು ಪಡೆಯುತ್ತಿದೆ. ಇದರಿಂದಾಗಿ ಬೇಸರಗೊಂಡ ಸಿಎಂ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಇಂದು ರಾತ್ರಿ ಇಲ್ಲವೇ ನಾಳೆ ಬೆಳಗ್ಗೆ ಸಿಎಂ ಕುಮಾರಸ್ವಾಮಿ ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!