ಗಾಂಧಿ ಮದುವೆಗೂ ಮುನ್ನದ ಲವ್ ಸ್ಟೋರಿ ನೀವು ಕೇಳಿರೋದಿಲ್ಲ

ಸರಳಾ ದೇವಿಯ ಸೌಂದರ್ಯ, ಸರಳತೆ ಮತ್ತು ಪ್ರತಿಭೆಗೆ ಮಹಾತ್ಮಾ ಗಾಂಧಿ ಅವರು ಮಾರು ಹೋಗಿದ್ದರು. ಅವರು ರಾಷ್ಟ್ರಕವಿ ರವೀಂದ್ರನಾಥ್ ಟ್ಯಾಗೋರ್ ಅವರ ಸಹೋದರಿಯ ಮಗಳು, ಸುಸಂಸ್ಕೃತೆ. ಅವರು ಕವಯಿತ್ರಿಯಾಗಿದ್ದರು, ರಾಷ್ಟ್ರೀಯ ಸಮಾವೇಶಗಳಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಸರಳಾ ದೇವಿಯವರು ಸ್ವತಂತ್ರ ಮನಸ್ಸಿನ ದಿಟ್ಟ ಮಹಿಳೆ ಮಾತ್ರವಾಗಿರಲಿಲ್ಲ, ಅಂದಿನ ಕಾಲದಲ್ಲಿ ಇದ್ದ ಕಟ್ಟುಪಾಡುಗಳನ್ನು ಧಿಕ್ಕರಿಸಿದ್ದರು, ಅನಾಚಾರಗಳನ್ನು ವಿರೋಧಿಸಿದ್ದರು, ಹೆಂಡತಿಯನ್ನು ಕಳೆದುಕೊಂಡವರನ್ನೇ ಮದುವೆಯಾಗಿ ಅಂದಿನ ಕಾಲದಲ್ಲೇ ಕ್ರಾಂತಿಗೀತೆ ಹಾಡಿದ್ದರು.

ಗಾಂಧೀಜಿ ಮನಸೋತ ಮಹಿಳೆಯ ಬಗ್ಗೆ ಹೀಗೆ ವಿವರಣೆ ನೀಡುತ್ತಾ ಹೋಗುತ್ತಾರೆ ಖ್ಯಾತ ಇತಿಹಾಸತಜ್ಞ ರಾಮಚಂದ್ರ ಗುಹಾ. ಅವರು ತಾವು ಬರೆದಿರುವ, ‘Gandhi: The Years That Changed the World, 1914 to 1948’ ಪುಸ್ತಕ ಕುರಿತಂತೆ ದಿ ಪ್ರಿಂಟ್ ಗೆ ನೀಡಿರುವ ಸಂದರ್ಶನದಲ್ಲಿ ಗಾಂಧೀಜಿ ಮತ್ತು ಸೌಂದರ್ಯದ ಸಾಕಾರಮೂರ್ತಿಯಾಗಿದ್ದ ಸರಳಾದೇವಿಯವರ ನಡುವಿನ ಆಕರ್ಷಣೆ, ಅವರೊಂದಿಗೆ ಇದ್ದ ಸಂಬಂಧ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಹೊರಹಾಕಿದ್ದಾರೆ.

ತಮ್ಮತನವನ್ನು ಕಂಡುಕೊಳ್ಳುವ, ಎಲ್ಲ ಪ್ರಲೋಭನೆಗಳನ್ನು ಮೆಟ್ಟಿನಿಲ್ಲುವ ಸತ್ಯ ಶೋಧನೆಯ ಹಾದಿಯಲ್ಲಿ ಮೋಹನದಾಸ ಕರಮಚಂದ ಗಾಂಧಿಯವರು ಹಲವಾರು ಪ್ರಯೋಗಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಿದ್ದರು. ಎಷ್ಟರ ಮಟ್ಟಿಗೆ ಎಂದರೆ, ಲೈಂಗಿಕತೆಯ ನಿಗ್ರಹವನ್ನು ಪರೀಕ್ಷೆ ಮಾಡುವ ನಿಟ್ಟಿನಲ್ಲಿ ಗಾಂಧೀಜಿ ಅವರು, ತಮಗಿಂತ ಕಿರಿಯ ವಯಸ್ಸಿನ (ಮರಿಮಗಳು) ಮನುಬೆನ್ ಜೊತೆ ಬೆತ್ತಲಾಗಿ ಮಲಗಿಕೊಳ್ಳುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಇದರ ಬಗ್ಗೆ ಸಾಕಷ್ಟು ವಿವರಣೆಗಳು, ಚರ್ಚೆಗಳು ನಡೆದಿವೆ. ಆದರೆ, ಗೊತ್ತಿಲ್ಲದ ಸಂಗತಿಯೆಂದರೆ, ಮೋಹನದಾಸ ಕರಮಚಂದ ಗಾಂಧಿ ಮತ್ತು ಲಾಹೋರ್ ನಲ್ಲಿ ತನ್ನ ಗಂಡನೊಂದಿಗೆ ನೆಲೆಸಿದ್ದ ಮಧ್ಯಮ ವಯಸ್ಸಿನ, ಪ್ರಗತಿಪರ ಮಹಿಳೆ ಸರಳಾ ದೇವಿ ಚೌಧುರಾಣಿ ಅವರ ನಡುವಿನ ತಂಗಾಳಿಯಂಥ ಪ್ರೇಮ ಕಥಾನಕ. ಆ ಸಮಯದಲ್ಲಿ ಗಾಂಧೀಜಿಯವರು ಕಸ್ತೂರಬಾ ಅವರೊಂದಿಗೆ ಮದುವೆಯಾಗಿದ್ದರು.

ಸ್ವಾತಂತ್ರ್ಯ ಹೋರಾಟ ತಾರಕಕ್ಕೇರಿದ ಸಂದರ್ಭದಲ್ಲಿ ಒಂದು ಬಾರಿ ಮಹಾತ್ಮಾ ಗಾಂಧಿಯವರು 1919ರಲ್ಲಿ ಪಾಕಿಸ್ತಾನದಲ್ಲಿರುವ ಲಾಹೋರ್ ಗೆ ಹೋಗಿದ್ದಾಗ ಸರಳಾ ದೇವಿಯವರ ಪತಿ ಜೈಲಿನಲ್ಲಿದ್ದರು. ಆಗ, ಗಾಂಧೀಜಿ ಮತ್ತು ಸರಳಾ ದೇವಿಯವರು ಸಂಧಿಸಿದ್ದಾರೆ. ಮೊದಲ ನೋಟದಲ್ಲೇ ಗಾಂಧೀಜಿಯವರು ಸರಳಾ ದೇವಿಯವರ ಸೌಂದರ್ಯಕ್ಕೆ, ಸರಳತೆಗೆ, ಅವರ ದಿಟ್ಟ ವ್ಯಕ್ತಿತ್ವಕ್ಕೆ ಮರುಳಾಗಿದ್ದಾರೆ. ಇಬ್ಬರಿಗೂ ಪರಸ್ಪರ ಗೌರವವಿತ್ತು, ಸಲುಗೆಯಿತ್ತು, ಬರಬರುತ್ತ ಪ್ರೇಮವೂ ಅರಳಿಬಿಟ್ಟಿತು. ಆದರೆ, ಇಬ್ಬರೂ ಎಂದಿಗೂ ದೈಹಿಕವಾಗಿ ಒಂದಾಗಲಿಲ್ಲ ಎಂದು ರಾಮಚಂದ್ರ ಗುಹಾ ಅವರು ನೆನಪಿಸಿಕೊಳ್ಳುತ್ತಾರೆ.

ಗುಜರಾತಿಗೆ ಗಾಂಧೀಜಿ ಮರಳಿದ ನಂತರ ಇಬ್ಬರ ನಡುವೆ ಪತ್ರ ವ್ಯವಹಾರ ಶುರುವಾಗುತ್ತದೆ. ಹಲವಾರು ಪ್ರೇಮ ಪತ್ರಗಳು ಕೂಡ ರವಾನೆಯಾಗುತ್ತವೆ. ಇದ್ದಕ್ಕಿದ್ದಂತೆ ಗಾಂಧೀಜಿಯವರು ಬರೆಯುವುದನ್ನೂ ನಿಲ್ಲಿಸಿಬಿಡುತ್ತಾರೆ. ಆಗ, ಸರಳಾ ದೇವಿ ಏಕೆ ಪತ್ರ ಬರೆಯುವುದನ್ನು ನಿಲ್ಲಿಸಿದಿರಿ? ಮೊದಲು ನನ್ನ ದುಃಖಗಳನ್ನು ಹಂಚಿಕೊಳ್ಳಲು ನೀವಾದರೂ ಇರುತ್ತಿದ್ದಿರಿ, ಈಗ ನನ್ನ ಕಣ್ಣೀರಿಗೆ ಇರುವುದೊಂದೇ ಬಚ್ಚಲುಮನೆ ಎಂದು ಸರಳಾ ದೇವಿ ಅವರು ಮಾರ್ಮಿಕವಾಗಿ ಬರೆದಿದ್ದರು. ಮದುವೆಯಾಗಿ ಹದಿನೈದಿಪ್ಪತ್ತು ವರ್ಷಗಳ ಸಂದ ನಂತರ ಇಂತಹ ಸಂಬಂಧಗಳು ಕುದುರುವುದು, ವಿರಹ ವೇದನೆ ಆಗುವುದು ಸಹಜ ಎಂದಿದ್ದಾರೆ ಗುಹಾ.

ಇಬ್ಬರ ನಡುವೆ ಮಧುರ ಬಾಂಧವ್ಯ ಎಷ್ಟು ಗಾಢವಾಗಿತ್ತೆಂದರೆ, ಅವರನ್ನು ಮತ್ತೆ ಹೋರಾಟದ ಹಾದಿಗೆ ಬಲವಂತವಾಗಿ ಎಳೆದು ತರಬೇಕಾಯಿತು. ಕೊನೆಗೆ, ರಾಜಾಜಿ ಎಂದೇ ಖ್ಯಾತರಾಗಿದ್ದ ಸಿ ರಾಜಗೋಪಾಲಾಚಾರಿ ಅವರ ಮಾತು ಕೇಳಿ, ಗಾಂಧೀಜಿಯವರು ಸರಳಾ ದೇವಿಯೊಡನೆ ಇಟ್ಟುಕೊಂಡಿದ್ದ ಸಂಬಂಧವನ್ನು ಕಡಿದುಕೊಳ್ಳಬೇಕಾಯಿತು. ನೀವು ಸರಳಾ ದೇವಿಯೊಡನೆ ಇಟ್ಟುಕೊಂಡಿರುವ ಪ್ರೇಮಮಯ ಸಂಬಂಧವನ್ನು ಆಯ್ದುಕೊಳ್ಳುತ್ತೀರೋ ಸ್ವಾತಂತ್ರ್ಯ ಹೋರಾಟವನ್ನು ಆಯ್ದುಕೊಳ್ಳುತ್ತೀರೋ ಎಂದು ಪ್ರಶ್ನಿಸಿದಾಗ, ಗಾಂಧೀಜಿಯವರು ತಮ್ಮ ಸಂಬಂಧಕ್ಕೆ ತಿಲಾಂಜಲಿಯಿಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಇಬ್ಬರ ನಡುವಿನ ಸಂಬಂಧದ ಬಗ್ಗೆ ಕಸ್ತೂರಬಾ ಅವರು ಏನೂ ಹೇಳುಂತೆಯೇ ಇರಲಿಲ್ಲ. ಏಕೆಂದರೆ, ಇದರ ಬಗ್ಗೆ ಅವರಿಗೆ ಮಾತ್ರವಲ್ಲ ಯಾರಿಗೂ ಗೊತ್ತೇ ಇರಲಿಲ್ಲ. ಅಷ್ಟು ಗೌಪ್ಯವನ್ನು ಗಾಂಧಿಜಿ ಕಾಪಾಡಿಕೊಂಡಿದ್ದರು ಎಂದಿದ್ದಾರೆ ಗುಹಾ.

ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಅದನ್ನು ನಿಯಂತ್ರಿಸಲು ಗಾಂಧೀಜಿಯವರಿಂದ ಕೂಡ ಸಾಧ್ಯವಾಗುತ್ತಿರಲಿಲ್ಲ. ಹಿಂಸಾಚಾರವನ್ನು ನಿಗ್ರಹಿಸಲು ಏಕೆ ಸಾಧ್ಯವಾಗುತ್ತಿಲ್ಲವೆಂದರೆ, ನಾನು ಪವಿತ್ರವಾಗಿಲ್ಲ ಎಂದು ಅವರು ನಂಬಿದ್ದರು. ತನ್ನನ್ನು ತಾನು ನಿಗ್ರಹಿಸಿಕೊಳ್ಳಲು ಸಾಧ್ಯವಾಗದವನು, ದೇಶಾದ್ಯಂತ ನಡೆಯುತ್ತಿರುವ ಹಿಂಸಾಚಾರವನ್ನು ಹೇಗೆ ನಿಗ್ರಹಿಸಲು ಸಾಧ್ಯ ಎಂದ ಅವರು, ತನ್ನನ್ನು ತಾನು ಲೈಂಗಿಕವಾಗಿ ನಿಗ್ರಹಿಸಿಕೊಳ್ಳಲು ಸಾಧ್ಯವೋ ಇಲ್ಲವೋ ಎಂದು ತಿಳಿಯಲು ತಮ್ಮ ಮರಿಮಗಳು ಮನುಬೆನ್ ಜೊತೆ ಬೆತ್ತಲಾಗಿ ಮಲಗುವ ಪ್ರಯೋಗವನ್ನೂ ಮಾಡಿದ್ದರು. ಗಾಂಧೀಜಿ ವರ್ತನೆ ಬಗ್ಗೆ ನಿಚ್ಚಳರಾಗಿದ್ದ ಮನು, ಗಾಂಧೀಜಿಯನ್ನು ತಾಯಿಯಂತೆ ನೋಡಿಕೊಳ್ಳುತ್ತಿದ್ದರು. ‘ವಿಚಿತ್ರ ಪ್ರಯೋಗ’ ಎಂಬ ಅಧ್ಯಾಯದಲ್ಲಿ ಇದರ ಬಗ್ಗೆ ಗುಹಾ ವಿವರಿಸಿದ್ದಾರೆ. ಈ ಸನ್ನಿವೇಶಗಳನ್ನು ಓದುಗರು ಹೇಗೆ ಬೇಕೋ ಹಾಗೆ ವ್ಯಾಖ್ಯಾನಿಸಬಹುದು ಎಂದು ಗುಹಾ ಅವರೇ ಹೇಳಿದ್ದಾರೆ.

Via: OneIndia Kannada

Leave a Reply

Your e-mail address will not be published. Required fields are marked *

error: Content is protected !!