ಬಿಎಸ್‌ಪಿ ಪಕ್ಷದಿಂದ ಉಚ್ಚಾಟನೆ ನಂತರ ಎನ್ ಮಹೇಶ್ ಬಿಜೆಪಿ ಸೇರ್ಪಡೆ.?

ಎನ್ ಮಹೇಶ್ ಅವರು ಜೆಡಿಎಸ್ ಪಕ್ಷದ ಬೆಂಬಲದೊಂದಿಗೆ ಕೊಳ್ಳೆಗಾಲದಲ್ಲಿ ಚುನಾವಣೆ ಎದುರಿಸಿ ಗೆದ್ದಿದ್ದರು. ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಚಿವರೂ ಸಹ ಆಗಿದ್ದರು. ರಾಜ್ಯದಲ್ಲಿ ಮೈತ್ರಿ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ತಮ್ಮನ್ನು ಕಡೆಗಣಿಸಲಾಗುತ್ತಿದೆ. ನಿರ್ಧಾರಗಳಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ ಎಂಬ ಭಾವನೆ ಎನ್‌.ಮಹೇಶ್‌ ಅವರಿಗಿತ್ತು.

ಹೀಗಾಗಿ ಕೊಳ್ಳೇಗಾಲ ಕ್ಷೇತ್ರದ ಶಾಸಕ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್‌ ಅವರು ತಮ್ಮ ಸಚಿವ ಸ್ಥಾನಕ್ಕೆ ಅಕ್ಟೋಬರ್ ತಿಂಗಳಿನಲ್ಲಿ ರಾಜೀನಾಮೆ ನೀಡಿದ್ದರು. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹಾಗೂ ಅವರ ನಡುವೆ ಹೇಳಿಕೆ ಪ್ರತಿ ಹೇಳಿಕೆಗಳೂ ನಡೆದಿದ್ದವು. ಮೈತ್ರಿಯಲ್ಲಿದ್ದುಕೊಂಡೇ ಮಹೇಶ್‌ ಅವರು ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದ್ದಕ್ಕೆ, ಕೈ ಪಕ್ಷದ ಸಚಿವರು ಮತ್ತು ಮುಖಂಡರಿಂದಲೂ ವಿರೋಧ ವ್ಯಕ್ತವಾಗಿತ್ತಿದ್ದವು ಹೀಗಾಗಿ ಮಾಯಾವತಿ ಅವರ ಅನುಮತಿ ಪಡೆದು ರಾಜಿನಾಮೆ ಸಲ್ಲಿಸಿದ್ದರು.

ಆದರೇ ಇದೀಗ ಮಹೇಶ್ ಅವರು ಮಾಯಾವತಿ ಅವರ ಮಾತನ್ನು ಧಿಕ್ಕರಿಸಿದ್ದು ಕಳೆದ ದಿನ ಮೈತ್ರಿ ಸರಕಾರದ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಗೈರಾಗುವ ಮೂಲಕ ದೋಸ್ತಿ ಸರಕಾರಕ್ಕೆ ಶಾಕ್ ಕೊಟ್ಟಿದ್ದಾರೆ. ಹೌದು ಮೈತ್ರಿ ಸರ್ಕಾರದ ಪರವಾಗಿ ಎಚ್ ಡಿ ಕುಮಾರಸ್ವಾಮಿ ಮಂಡಿಸಿದ  ವಿಶ್ವಾಸಮತಯಾಚನೆ ವೇಳೆಯಲ್ಲಿ ಸದನದಿಂದ ದೂರ ಉಳಿದಿದ್ದ ಕೊಳ್ಳೇಗಾಲದ ಬಿಎಸ್ಪಿ ಪಕ್ಷದ ಎನ್. ಮಹೇಶ್ ಅವರು ತಮ್ಮ ಪಕ್ಷದಿಂದ ಅಮಾನತುಗೊಂಡಿದ್ದಾರೆ.

ಪಕ್ಷದ ಆದೇಶದಂತೆ ಮಹೇಶ್ ಮೈತ್ರಿ ಸರಕಾರದ ಪರ ಮತಯಾಚನೆ ಮಾಡಬೇಕಿತ್ತು ಆದರೇ ಪಕ್ಷದ ಆದೇಶ ಉಲ್ಲಂಘಿಸಿದ್ದಕ್ಕಾಗಿ  ಶಾಸಕ ಎನ್. ಮಹೇಶ್ ಅವರನ್ನು ಬಿಎಸ್‌ಪಿ ಪಕ್ಷದಿಂದ ಅಮಾನತುಪಡಿಸಿ ಎಂದು ಪಕ್ಷದ ವರಿಷ್ಠೆ ಮಾಯಾವತಿ ಖಡಕ್ ಆದೇಶ ಹೊರಡಿಸಿದ್ದಾರೆ.

ಮೈತ್ರಿ ಸರ್ಕಾರದ ಪರವಾಗಿ  ಪಾಲ್ಗೊಂಡು ಕುಮಾರಸ್ವಾಮಿ ಅವರನ್ನು  ಬೆಂಬಲಿಸುವಂತೆ ಮಾಯಾವತಿ ಆದೇಶ ನೀಡಿದ್ದರೂ ಸಹ ಎನ್ ಮಹೇಶ್ ಗೈರಾಗಿದ್ದಾರೆ ಈ ಕಾರಣಕ್ಕಾಗಿ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಮಾಯಾವತಿ ತಮ್ಮ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಪಕ್ಷದಿಂದ ಉಚ್ಚಾಟಿಸಿದ ಮಾತ್ರಕ್ಕೆ ಎನ್‌.ಮಹೇಶ್‌ ಅವರ ಶಾಸಕ ಸ್ಥಾನಕ್ಕೇನೂ ಗಂಡಾಂತರವಿಲ್ಲ. ಅವರು ಶಾಸಕರಾಗಿಯೇ ಮುಂದುವರಿಯಲಿದ್ದಾರೆ. 

ಒಂದು ವೇಳೆ ಮಹೇಶ್ ಗೈರು ಹಾಜರಿಯಲ್ಲಿ ಬಿಜೆಪಿ ಕೈವಾಡ ಇರುವುದು ನಿಜವೇ ಆದರೆ, ಎನ್‌.ಮಹೇಶ್‌ ಅವರು ಕಮಲ ಪಾಳಯದ ಸರಕಾರದಲ್ಲಿ ಸಚಿವರಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಮಹೇಶ್‌ ಅವರು ಏನು ಹೇಳುತ್ತಾರೆ ಅವರ ಮುಂದಿನ ನಿಲುವೇನು ಎಂಬುದು ಕಾದು ನೋಡಬೇಕು.

-Team Republic Kannada

Leave a Reply

Your e-mail address will not be published. Required fields are marked *

error: Content is protected !!