ಈ ಊರಿಗೆ ಹೆಸರೇ ಇಲ್ಲ ಆದರೂ ಅಲ್ಲಿನ ಜನ ಬದುಕುವ ರೀತಿ ತಿಳಿದರೇ ಅಚ್ಚರಿಯಾಗ್ತಿರಾ.!

ಹಂಚಿನ ಮನೆಗಳು, ಬಂಗಲೆಗಳು, ಗುಡಿಸಲುಗಳಲ್ಲಿ ಇಲ್ಲವೇ ಹಡಗುಗಳ ಮೇಲೆ ಗುಡಿಸಲು ಕಟ್ಟಿ ಅಲ್ಲಿ ವಾಸಿಸುವುದನ್ನು ನೀವು ನೋಡಿರುತ್ತೀರಿ. ಆದರೆ ವರ್ಷ ಪೂರ್ತಿ ನೀರಿನ ಮೇಲೆ ಗುಡಿಸಲು ಕಟ್ಟಿ ವಾಸಿಸುವರನ್ನು ನೋಡಿದರೆ ವಿಸ್ಮಯ ಎನಿಸುತ್ತೆ. ಅದನ್ನು ನೀವು ಊಹಿಸಲು ಸಾಧ್ಯವಿಲ್ಲ ಆದ್ರೆ ಇದು ಸತ್ಯ.

ಆ ಗ್ರಾಮದಲ್ಲಿ ಯಾವುದೇ ಸಂಪರ್ಕ ಸಾಧನ, ವಿದ್ಯುತ್‌‍ಶಕ್ತಿ ನೆರವಿಲ್ಲದೇ ಇಂದಿನ ಆಧುನಿಕ ಕಾಲದಲ್ಲೂ ಜನರು ಹಳೆಯ ಕಾಲದಂತೇ ಬದುಕುತ್ತಿರುವುದನ್ನು ಕೇಳಿದರೆ ನೀವು ಅಚ್ಚರಿ ಪಡದೇ ಇರಲಾರಿರಿ. ಈ ತರಹದ ಯಾವುದೇ ಮೂಲಭೂತ ಸಂಪರ್ಕಗಳಿಲ್ಲದೇ ನೆಮ್ಮದಿಯಿಂದ ಜೀವನ ಸಾಗಿಸುತ್ತಿರುವ ಒಂದು ಜನಾಂಗ ಇರುವುದು ದಕ್ಷಿಣ ಏಷ್ಯಾದ ಮಲೇಷಿಯಾ ಮತ್ತು ಫಿಲಿಪೈನ್ಸ್‌‌ನಲ್ಲಿ ಕಂಡುಬರುವ ಸಮುದ್ರದ ಹಿಂದೆ ಇರುವ ಪ್ರದೇಶದಲ್ಲಿ ಕಾಣಬಹುದು.

ಇದನ್ನು ದ್ವೀಪ ಅಂತ ಕರಿಬೇಕಾ ಊರು ಅಂತ ಕರಿಬೇಕಾ ಗೊತ್ತಿಲ್ಲ, ಈ ಪ್ರದೇಶಕ್ಕೆ ನಿರ್ದಿಷ್ಟ ಹೆಸರಿಲ್ಲ. ಅಷ್ಟೇ ಅಲ್ಲ, ಅಲ್ಲಿ ವಾಸಿಸುವ ಯಾರೊಬ್ಬರಿಗೂ ಆ ದೇಶದ ಪೌರತ್ವವಿಲ್ಲ ಆದರೂ ಅವರು ಅಲ್ಲೇ ಬದುಕನ್ನು ಕಟ್ಟಿಕೊಂಡು ಸ್ವತಂತ್ರವಾಗಿ ಬದುಕುತ್ತಿದ್ದಾರೆ. ಇವರಿಗೆ ನಿನ್ನೆ ನಾಳೆಗಳ ಚಿಂತೆ ಇಲ್ಲ. ದಿನನಿತ್ಯದ ಜೀವನ ನಡೆಸಲು ಸಮುದ್ರವೇ ಇವರಿಗೆ ಆಸರೆ ಅಲ್ಲಿಯೇ ಇವರ ಊಟ.

ಈ ಪ್ರದೇಶ ಒಂದು ಬುಡಕಟ್ಟು ಜನಾಂಗದವರ ವಾಸಸ್ಥಳವಾಗಿದ್ದು, ಅವರನ್ನು ಬಜೌ ಬುಡಕಟ್ಟಿನವರು ಎಂದೇ ಈ ಪ್ರದೇಶದಲ್ಲಿ ಕರೆಯುತ್ತಾರೆ. ಈ ಬುಟಕಟ್ಟು ಜನರು ಸಮುದ್ರದ ತೀರದಲ್ಲಿ ನೀರಿನ ಮೇಲೆ ಗುಡಿಸಲು ನಿರ್ಮಿಸಿಕೊಂಡು ಅಲ್ಲಿಯೇ ವಾಸಿಸುತ್ತಾರೆ. ಇದು ಅವರ ಪರಂಪರೆಯಾಗಿದ್ದು ಅನಾದಿ ಕಾಲದಿಂದ ಬಂದ ಪದ್ಧತಿಯಾಗಿದೆಯಂತೆ.

ಈ ದ್ವೀಪಗಳಲ್ಲಿ ಈ ಬುಡಕಟ್ಟಿನ ಹಲವಾರು ಜನರಿದ್ದು, ಮಲೇಷಿಯಾದ್ಯಾದಂತ ಇಂತಹ ಬುಡಕಟ್ಟು ಸಂಸ್ಕೃತಿಯನ್ನು ನಾವು ಕಾಣಬಹುದಾಗಿದೆ. ಅಲ್ಲಿ ವಾಸಿಸುವ ಜನರಿಗೆ ಯಾವುದೇ ರೀತಿಯ ಶಿಕ್ಷಣವಿರುವುದಿಲ್ಲ ಅವರು ಪರಸ್ಪರ ತಮ್ಮ ಬುಡಕಟ್ಟಿನ ಭಾಷೆಯಲ್ಲಿ ಮಾತನಾಡುತ್ತಾರೆ. ಆ ಭಾಷೆಗೆ ಲಿಪಿಯಿಲ್ಲ.

ಈ ಬುಡಕಟ್ಟು ಜನಾಂಗದವರ ಕೆಲಸ ಮೀನುಗಾರಿಕೆಯಾಗಿದ್ದು, ಪ್ರತಿದಿನದ ಉಟೋಪಚಾರಕ್ಕೆ ಅವರು ಮೀನುಗಳು ಮತ್ತು ಸಮುದ್ರದಲ್ಲಿ ಸಿಗುವಂತ ಆಹಾರ ಪದಾರ್ಥವನ್ನೇ ತಮ್ಮ ಆಹಾರವಾಗಿ ಬಳಸುತ್ತಾರೆ. ಇಲ್ಲಿನ ಮಕ್ಕಳಿಗೆ ಸಮುದ್ರವೇ ಪಾಠಶಾಲೆ. ಇಲ್ಲಿ ಚಿಕ್ಕಂದಿನಿಂದಲೇ ಮಕ್ಕಳಿಗೆ ಮೀನು ಹಿಡಿಯುವುದು ಮತ್ತು ದೋಣಿ ನಡೆಸುವುದನ್ನು ಕಲಿಸಲಾಗುತ್ತದೆ. ಈ ಜನಾಂಗದ ಮಹಿಳೆಯರು ಕೂಡಾ ದೋಣಿ ನೆಡೆಸುವುದನ್ನು ಕಲಿತಿದ್ದಾರೆ.

ಮೀನು ಹಿಡಿಯುವ ಕಲೆ ಇವರಿಗೂ ಪರಂಪರೆಯಾಗಿ ಬಂದಿದೆ. ಇದು ಈ ಬುಡಕಟ್ಟು ಜನಾಂಗದಲ್ಲಿ ಪರಂಪರಾಗತವಾಗಿ ರೂಢಿಸಿಕೊಂಡು ಬಂದ ಈ ಮೀನುಗಾರಿಕೆ ಅದನ್ನು ಇಂದಿನ ಆಧುನಿಕ ಯುಗದಲ್ಲೂ ಮುಂದುವರೆಸಿಕೊಂಡು ಹೋಗುತ್ತಿರುವುದು ವಿಶೇಷವೆಂದೇ ಹೇಳಬಹುದು.

ಇವರು ನೀರಿನ ಮೇಲೆ ಅಚ್ಚುಕಟ್ಟಾಗಿ ಮನೆಯನ್ನು ನಿರ್ಮಿಸುವ ಕಲೆಯಲ್ಲಿ ಸಿದ್ಧಹಸ್ತರಾಗಿದ್ದು, ಮರದ ವಸ್ತುಗಳನ್ನು ಬಳಸಿ ಅಚ್ಚುಕಟ್ಟಾಗಿ ಗುಡಿಸಲನ್ನು ನಿರ್ಮಿಸುತ್ತಾರೆ. ಅಲ್ಲದೇ ಒಂದು ಗುಡಿಸಲಿನಿಂದ ಇನ್ನೊಂದು ಗುಡಿಸಲಿಗೆ ಹೋಗಲು ಸಂಪರ್ಕಕ್ಕಾಗಿ ಮರದ ಕಟ್ಟಿಗೆಗಳನ್ನು ಕಟ್ಟಿ ಚಲಿಸುವ ಮಾರ್ಗವಾಗಿ ಮಾಡಿಕೊಳ್ಳುತ್ತಾರೆ.

ಈ ಬುಡಕಟ್ಟಿನ ಭಾಷೆಗೆ ಯಾವುದೇ ಲಿಪಿ ಇಲ್ಲದಿರುವ ಕಾರಣ ಇವರಿಗೆ ಬರವಣಿಗೆ ಎಂದರೆ ಏನು ಎನ್ನುವುದೇ ತಿಳಿದಿಲ್ಲ. ಅಲ್ಲದೇ ಬೇರೆ ಭಾಷೆಯ ಬಗ್ಗೆ ತಿಳುವಳಿಕೆ ಇಲ್ಲದ ಕಾರಣ ಇವರು ಇನ್ನೂ ಹಿಂದುಳಿದಿದ್ದಾರೆ ಎನ್ನಬಹುದು. ಒಟ್ಟಿನಲ್ಲಿ ನಾಗರೀಕತೆ ಬೆಳೆಯುತ್ತಿದ್ದರೂ ಇಂದಿನ ನವಯುಗಕ್ಕೆ ಸೆಡ್ಡುಹೊಡೆದು ಹಿಂದಿನ ಪರಂಪರೆಗೆ ಹೊಂದಿಕೊಂಡು ಸಾಗುತ್ತಿರುವ ಇವರ ಬದುಕು ವಿಚಿತ್ರವಾದರೂ ಅಚ್ಚರಿ ಎಂದೇ ಹೇಳಬಹುದು.

-Team Republic Kannada

Leave a Reply

Your e-mail address will not be published. Required fields are marked *

error: Content is protected !!