ಕೇವಲ 59 ನಿಮಿಷದಲ್ಲಿ 1 ಕೋಟಿ ಸಾಲ ನೀಡಲಿದೆ ಮೋದಿ ಸರಕಾರ; ಈ ಸಾಲ ಸೌಲಭ್ಯ ಪಡೆಯಲು ಈ ರೀತಿ‌ ಮಾಡಿ

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸಲು 12 ಹೊಸ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಇದರಲ್ಲಿ 59 ನಿಮಿಷಗಳಲ್ಲಿ 1 ಕೋಟಿ ರೂ. ಸಾಲ ನೀಡುವ ಯೋಜನೆ ಅತ್ಯಂತ ಪ್ರಮುಖವಾದುದು. 

ದೇಶದ ಸಣ್ಣ ಮತ್ತು ಮಧ್ಯಮ ವಲಯದ ಉದ್ದಿಮೆಗಳು ನೋಟು ಅಮಾನ್ಯತೆ ಹಾಗೂ ಜಿಎಸ್‌ಟಿಯ ಆರಂಭಿಕ ದಿನಗಳಲ್ಲಿ ನಗದು ಕೊರತೆ ಹಾಗೂ ಸಾಲದ ಪೂರೈಕೆಯ ವ್ಯತ್ಯಯದಿಂದ ಸಾಕಷ್ಟು ತೊಂದರೆಗೆ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ಈ ಉದ್ದಿಮೆಗಳನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಸುಲಭ ಹಾಗೂ ತ್ವರಿತ ಸಾಲ ಯೋಜನೆಯನ್ನು ಘೋಷಿಸಿದ್ದಾರೆ. 

ಇದರಿಂದಾಗಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಇನ್ನು ಸುಲಭವಾಗಿ ಸಾಲ ಸಿಗಲಿದೆ. ಇದುವರೆಗೆ ಬ್ಯಾಂಕ್‌ಗಳು ಎಂಎಸ್‌ಎಂಇಗಳಿಗೆ ಸಾಲ ವಿತರಿಸಲು ಹಿಂದೇಟು ಹಾಕುತ್ತಿದ್ದವು. ಬಹುತೇಕ ಎಂಎಸ್‌ಎಂಇಗಳು ಅಸಂಘಟಿತ ವಲಯದಲ್ಲಿರುವುದರಿಂದ ಸಾಲ ಸುಲಭವಾಗಿ ಸಿಗುತ್ತಿರಲಿಲ್ಲ.

ಅಲ್ಲದೇ 2016ರ ನವೆಂಬರ್ ನಲ್ಲಿ ಐತಿಹಾಸಿಕ ನೋಟು ಅಮಾನ್ಯತೆ ಘೋಷಣೆಯಾದ ಬಳಿಕ, ಎಂಎಸ್‌ಎಂಇಗಳಿಗೆ ತೀವ್ರ ನಗದು ಕೊರತೆಯ ಬಿಕ್ಕಟ್ಟು ಎದುರಾಗಿತ್ತು. ಅನೇಕ ಎಂಎಸ್‌ಎಂಇಗಳು ನಗದು ಮೂಲಕವೇ ಹೆಚ್ಚಿನ ವಹಿವಾಟು ನಡೆಸುತ್ತಿದ್ದುದು ಇದಕ್ಕೆ ಕಾರಣ. ಜಿಎಸ್‌ಟಿ ಜಾರಿಯಾದ ನಂತರ ಕೂಡ ಬಿಕ್ಕಟ್ಟು ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ಎಂಎಸ್‌ಎಂಇಗಳಿಗೆ ಸುಲಭ ಸಾಲ ನಿರ್ಣಾಯಕವಾಗಿದೆ.

ಈಗಾಗಲೇ ಭಾರತವು ಉದ್ಯಮಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ 23 ಅಂಕ ಸುಧಾರಿಸಿ 77ನೇ ಸ್ಥಾನ ಗಳಿಸಿದೆ. ಸಣ್ಣ ಮತ್ತು ಮಧ್ಯಮ ವಲಯದ ಉದ್ದಿಮೆಗಳಿಗೆ ಅನುಕೂಲವಾಗುವಂತೆ ಕೇವಲ 59 ನಿಮಿಷಗಳಲ್ಲಿ 1 ಕೋಟಿ ರೂ. ತನಕ ಸಾಲ ಮಂಜೂರು ಮಾಡುವ ಆನ್‌ಲೈನ್‌ ವ್ಯವಸ್ಥೆ ಇದಾಗಿರುವುದರಿಂದ ಸಣ್ಣ ಉದ್ದಿಮೆದಾರರಿಗೆ ಅನುಕೂಲವಾಗಲಿದೆ.

ಈ ಹಿಂದಿನಿಂದಲೂ ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು (ಎಂಎಸ್‌ಎಂಇ) ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಜಿಡಿಪಿ ಪ್ರಗತಿಯಲ್ಲೂ ಈ ಕ್ಷೇತ್ರದ ಪಾಲನ್ನು ಅಲ್ಲಗಳೆಯಲಾಗದು.  

ಭಾರತದಲ್ಲಿ 6.3 ಕೋಟಿ ಎಂಎಸ್‌ಎಂಇಗಳಿದ್ದು, 11 ಕೋಟಿ ಮಂದಿಗೆ ಉದ್ಯೋಗ ಕಲ್ಪಿಸಿವೆ. ಉದ್ಯೋಗರಹಿತ ಬೆಳವಣಿಗೆಯ ಆತಂಕದ ನಡುವೆ, ಇದು ಉದ್ಯೋಗ ಸೃಷ್ಟಿಗೆ ಅನುಕೂಲವಾಗಲಿದೆ. ಇಷ್ಟು ಮಾತ್ರವಲ್ಲದೆ ಎಂಎಸ್‌ಎಂಇಗಳಿಗೆ ಶೇ.2ರಷ್ಟು ಬಡ್ಡಿ ಸಬ್ಸಿಡಿ, ಕಾರ್ಮಿಕ ಕಾನೂನುಗಳಲ್ಲಿ ವಿನಾಯಿತಿ, ಇ-ಮಾರ್ಕೆಟ್‌, ಫಾರ್ಮಾ ಕ್ಲಸ್ಟರ್‌ಗಳ ಸ್ಥಾಪನೆ ಇತ್ಯಾದಿ ಅನುಕೂಲಗಳು ಉದ್ಯಮಸ್ನೇಹಿಯಾಗಿವೆ.

– Team Google Guru

Leave a Reply

Your email address will not be published. Required fields are marked *

error: Content is protected !!