ಪೂರ್ಣ ಬಹುಮತವಿದ್ದರೂ ಎನ್​ಡಿಎ ಬಿಟ್ಟು ಸರ್ಕಾರ ರಚಿಸೋಕೆ ಬಿಜೆಪಿಗೆ ಸಾಧ್ಯವಿಲ್ಲ

ಬಿಜೆಪಿಗೆ ಸ್ಪಷ್ಟಬಹುಮತ ಸಿಕ್ಕಿದೆ. ಹಿಂದೆಂದೂ ಕಾಣದಂತಹ ಪ್ರಚಂಡ ಗೆಲುವು ಬಿಜೆಪಿ ತನ್ನದಾಗಿಸಿಕೊಂಡಿದೆ. ಹೀಗಾಗಿ ಬಿಜೆಪಿ ಮಿತ್ರ ಪಕ್ಷಗಳ ಅವಶ್ಯಕತೆ ಇಲ್ಲದೆಯೂ ಸರ್ಕಾರ ರಚಿಸಬಹುದಲ್ಲವೇ ಅನ್ನೋ ಮಾತುಗಳು ಇದೀಗ ಕೇಳಿಬರುತ್ತಿದೆ. ಆದ್ರೆ ಸ್ವತಃ ಬಿಜೆಪಿ ಇಂತಹ ದುಸ್ಸಾಹಸಕ್ಕೆ ಕೈ ಹಾಕಲು ಹೋಗುವುದಿಲ್ಲ. ಬಹುಮತ ಇದ್ದರೂ ಮಿತ್ರ ಪಕ್ಷಗಳನ್ನ ಒಗ್ಗೂಡಿಸಿಕೊಂಡೆ ಬಿಜೆಪಿ ಸರ್ಕಾರ ರಚಿಸುವ ಅನಿವಾರ್ಯತೆ ಇದೆ.

ಕಾರಣ 1. ಕೇಂದ್ರ ಮಾತ್ರವಲ್ಲ ರಾಜ್ಯದ ಸ್ಥಿತಿ ಬಿಜೆಪಿ ನೋಡಿಕೊಳ್ಳಬೇಕು

ಕೇಂದ್ರದಲ್ಲಿ ಭಾರೀ ಬಹುಮತ ಪಡೆದಿದ್ದೇವೆ ಅಂತ ಬಿಜೆಪಿ ಬೀಗುತ್ತಿದ್ದರೂ, ಎನ್​ಡಿಎಯ ಮಿತ್ರ ಪಕ್ಷಗಳನ್ನ ಕಡೆಗಣಿಸುವಂತಿಲ್ಲ. ಯಾಕೆಂದ್ರೆ ರಾಜ್ಯಗಳ ಬಗ್ಗೆಯೂ ಬಿಜೆಪಿ ಯೋಚಿಸಬೇಕಿದೆ. ಕೇಂದ್ರದ ರೀತಿಯಲ್ಲಿ ಕೆಲವು ರಾಜ್ಯಗಳಲ್ಲಿ ಎನ್​ಡಿಎ ಮೈತ್ರಿಕೂಟದೊಂದಿಗೆ ಸೇರಿ ಸರ್ಕಾರ ರಚಿಸಿದೆ. ಬಿಹಾರದಲ್ಲಿ ಸರ್ಕಾರ ರಚನೆಗೆ ತನ್ನ ಮೈತ್ರಿ ಪಕ್ಷವಾದ ಜೆಡಿಯು ಜೊತೆ ಕೈ ಜೋಡಿಸಿದೆ.

ಇನ್ನು ಮಹಾರಾಷ್ಟ್ರದಲ್ಲೂ ಬಿಜೆಪಿ ಶಿವಸೇನೆಯ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದಲ್ಲದೆ ಸದ್ಯ ಎನ್​ಡಿಎಯಲ್ಲಿರುವ ಮಿತ್ರ ಪಕ್ಷಗಳೊಂದಿಗೆ ಅಸ್ಸಾಂ, ತ್ರಿಪುರ, ಅರುಣಾಚಲ ಪ್ರದೇಶ, ಮೇಘಾಲಯ, ಸಿಕ್ಕಿಂ, ನಾಗಲ್ಯಾಂಡ್​ಗಳಲ್ಲೂ ಸರ್ಕಾರ ರಚಿಸಿದೆ. ಹೀಗಾಗಿ ಕೇಂದ್ರದಲ್ಲಿ ಕೊಂಚ ಅದಲು-ಬದಲಾದ್ರು ಅದು ನೇರವಾಗಿ ರಾಜ್ಯಕ್ಕೂ ತಟ್ಟಲಿದೆ. ಕೇಂದ್ರದಲ್ಲಿ ಮೈತ್ರಿ ಮುರಿದುಬಿದ್ದರೆ ರಾಜ್ಯದಲ್ಲೂ ಖೇಲ್​ ಖತಂ ಆಗಲಿದೆ.

ಕಾರಣ 2. ಲೋಕಸಭೆ ಮಾತ್ರವಲ್ಲ ಬಿಜೆಪಿಗೆ ರಾಜ್ಯಸಭೆಯೂ ಇಂಪಾರ್ಟೆಂಟ್​

ಇನ್ನು ಯಾವುದೇ ಮಸೂದೆ, ಕಾನೂನು ಜಾರಿಗೊಳಿಸಬೇಕಾದ್ರೂ ಆಡಳಿತ ಪಕ್ಷಕ್ಕೆ ಸಂಸತ್ತಿನ ಮೇಲ್ಮನೆಯಾಗಿರುವ ರಾಜ್ಯಸಭೆ ತುಂಬಾನೇ ಮುಖ್ಯವಾಗಿರುತ್ತದೆ. ಸದ್ಯ ಮೈತ್ರಿ ಕೂಟ ಇಲ್ಲದಿದ್ದರೆ ಬಿಜೆಪಿಗೆ ಬಿಲ್​ ಪಾಸ್​ ಮಾಡಲು ತುಂಬಾನೆ ಕಷ್ಟ ಆಗಲಿದೆ. ಯಾಕೆಂದ್ರೆ ರಾಜ್ಯಸಭೆಯ ಒಟ್ಟು ಸದಸ್ಯ ಬಲ 245 ಇದ್ದು, ಯಾವುದೇ ಬಿಲ್​ ಪಾಸ್​ ಮಾಡೋಕೆ ಇದರ ಅರ್ಧ ಅಂದ್ರೆ 123 ಸದಸ್ಯರ ಬೆಂಬಲ ಬೇಕು.

ಆದರೆ ಬಿಜೆಪಿ ಬಳಿ ಕೇವಲ 73 ಸದಸ್ಯರಿದ್ದಾರೆ. ಇನ್ನು ಬಿಜೆಪಿ ತನ್ನ ಎನ್​ಡಿಎ ಮಿತ್ರಪಕ್ಷಗಳ ಸದಸ್ಯರನ್ನ ಒಗ್ಗೂಡಿಸಿದ್ರೆ ಆಗ ಬಿಜೆಪಿ ಬಲ 102 ಆಗುತ್ತೆ. ಹೀಗಾಗಿ ಉಳಿದ ಬೆಂಬಲವ್ನ ಇತರೆ ಪಕ್ಷಗಳಿಂದ ಪಡೆದುಕೊಳ್ಳಬಹುದಾಗಿದ್ದು ಎನ್​ಡಿಎ ಮಿತ್ರಕೂಟದಿಂದಾಗಿ ಇಲ್ಲಿ ಸುಲಭವಾಗಿ ತನ್ನ ಸದಸ್ಯರ ಸಂಖ್ಯಾ ಬಲವನ್ನ ಬಿಜೆಪಿ ಏರಿಸಿಕೊಂಡು ಮಸೂದೆ ಪಾಸ್​ ಮಾಡಬಹುದು.

Via FirstNews

Leave a Reply

Your e-mail address will not be published. Required fields are marked *

error: Content is protected !!